Wednesday, August 26, 2009

ಇಂತಹ ಘಳಿಗೆ ಮತ್ತೊಮ್ಮೆ ಬಾರದಿರಲಿ

ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸೋರುತ್ತಿತ್ತು. ಗೊಳೋ ಎಂದು ಹಣೆ ಹಣೆ ಬಡಿದುಕೊಂಡು ಅಳುತ್ತಿದ್ದೆ. ಅಮ್ಮ ದಿಗ್ಬ್ರಾಂತರಾಗಿ ಕಿರುಚುತ್ತಿದ್ದರು ನಮ್ಮಮನೆಯವರ ಮೊಗದಲ್ಲಿ ಆತಂಕ ಜೊತೆಗೆ ಕಣ್ಣಲ್ಲಿ ನೀರು ನನ್ನ ಮುದ್ದಿನ ಯಶಿತಾಳ ಪರಿಸ್ಥಿತಿಯೇ ಹಾಗಾಗಿತ್ತು. ಕಾರ್ ದಾರಿಯ ನಡುವಲ್ಲಿ ನಿಂತು ಬಿಟ್ಟಿತು. ಯಶಿತಾ ಇದ್ದಕ್ಕಿದ್ದಂತೆ ಮೇಲು ಗಣ್ಣು ಮಾಡಿ ಸ್ಥಬ್ಧಳಾಗಿದ್ದಳು. ಇನ್ನು ಅವಳುನಮ್ಮ ಕೈ ತಪ್ಪಿದಂತೆ ಎಂದು ಅನ್ನಿಸಿತು
ಹೀಗಾಗುವುದಕ್ಕೆ ಹಿಂದಿನ ದಿನ ಯಶಿತಾ ನಾರ್ಮಲ್ ಆಗಿಯೇ ಸ್ಕೂಲಿಗೆ ಹೋಗಿ ಬಂದಳು ನನ್ನೊಡನೆ ಆಡುತ್ತಿದ್ದಳು.ನಂತರ ನಾನು ಇನ್ಸ್ಟ್ಯೂಟ್‌ಗೆ ಹೊರಟೆ
ಸಾಯಂಕಾಲ ಅವಳ ಅಪ್ಪನೊಡನೆ ಆಡುತ್ತಿದ್ದಳು
ಸ್ವಲ್ಪ ಹೊತ್ತಿನ ನಂತರ ಇವರಿಂದ ಫೋನ್ ಬಂತು. ರೂಪ ಮಗೂಗೆ ತುಂಬಾ ಜ್ವರ ಬೇಗ ಬಾ ಎಂದರು. ಡೋಲೋಪರ್ ಕೊಡಿ ಎಂದು ಹೇಳಿ ನನ್ನ ಕೆಲಸದಲ್ಲಿ ತಲ್ಲೀನಳಾದೆ.
ಮತ್ತೆ ಸ್ವಲ್ಪ ಹೊತ್ತಿನ ನಂತರ ನಮ್ಮ ಅಮ್ಮ ಫೋನ್ ಮಾಡಿ ಅವಳಿಗೆ ೧೦೨ ಡಿಗ್ರೀ ಜ್ವರ ಇದೆ ಎಂದಾಗ ಎದೆ ಡವಡವ ಎಂದಿತು ಕೂಡಲೆ ಹತ್ತು ನಿಮಿಷದಲ್ಲಿ ಹೊರಟೆ.
ಮನೆಗೆ ಹೋಗುವಷ್ಟ್ರರಲ್ಲಿ ಯಶಿತಾ ಮಲಗಿದ್ದಳು ಏನೇನೋ ಕನವರಿಸುತ್ತಿದ್ದಳು. ಮತ್ತೆ ಜ್ವರ ಚೆಕ್ ಮಾಡಿದಾಗ ಅದು ೧೦೩ ದಾಟಿತ್ತು .
ವೇಳೆ ಮಾಡಿದರೆ ಅಪಾಯ ಎಂದು ಮನಗಂಡು ಮಗುವನ್ನು ಡಾಕ್ಟರ್ ಬಳಿ ಒಯ್ದೆವು . ಅವರು ಏನೂ ಪ್ರಾಬ್ಲಮ್ ಇಲ್ಲ . ಎಂದು ಹೇಳಿ ಅವಳಿಗೆ ಆಂಟಿ ಬಯಾಟಿಕ್ ಸಿರಪ್ ಕೊಟ್ಟರು.
ಮನೆಗೆ ಬಂದು ಅವುಗಳನ್ನು ಕೊಟ್ಟೆವು
ಆದರೂ ರಾತ್ರಿ ಎಲ್ಲಾ ಜ್ವರ ಬಿಡಲಿಲ್ಲ
ಮಗು ಏನೇನೋ ಕನವರಿಸುತ್ತಿತ್ತು. ಜೊತೆಗೆ ನಮ್ಮಾರ ಬಗ್ಗೆಯೂ ಜ್ನಾನವೇ ಇಲ್ಲ. ಜ್ವರ ೧೦೩ಕ್ಕಿಂತ ಕೆಳಗಿಳಿಯಲಿಲ್ಲ
ಬೆಳಗ್ಗೆ ನಾರಾಯಣ ಹೃದಯಾಲಯಕ್ಕೆ ಕರೆದೊಯ್ದೆವು. ಡಾಕ್ಟರ್ ಪರಿಮಳಾ ಮಗುವನ್ನು ಚೆಕ್ ಮಾಡಿ ನನ್ನೊಂದಷ್ಟು ಬೈದರು . ಮಗುವಿಗೆ ಸ್ವೆಟರ್ ಹಾಕಿದ್ದೀರಾ ಅದಕ್ಕೆ ಉಷ್ಟತೆ ಜಾಸ್ತಿಯಾಗಿದೆ ಎಂದರು. ಅವರ ಮಗಳಿಗೆ ಹೀಗಾದಾಗ ಮಗಳನ್ನು ತಣ್ಣೀರು ಸುರಿಯುವ ನಲ್ಲಿಯ ಕೆಳಗೆ ಕೂರಿಸಿದ್ದರಂತೆ. ಹಾಗೆ ಮಾಡಿದರೆ ಉಷ್ಣತೆ ಇಳಿಯುತ್ತದೆ ಎಂದು ಹೇಳಿ ಮತ್ತೆ ಬೇರೆ ಸಿರಪ್ ಕೊಟ್ಟರು. ಹಾಗೆಯೇ ಒಂದಷ್ಟು ಟೆಸ್ಟ್ ಮಾಡಿಸಲು ಹೇಳಿದರು. ಮಗುವಿನ ರಕ್ತ ಮೂತ್ರ ಕೊಟ್ಟು ಬಂದೆವು.
ಮಗುವನ್ನು ಮನೆಗೆ ಕರೆದುಕೊಂಡು ಬಂದೆವು.
ಹನ್ನೆರೆಡು ಘಂಟೆಯಾಯ್ತು. ಮಗುವಿನ ಜ್ವರ ಇಳಿಯಲ್ಲಿಲ್ಲ ಬದಲಾಗಿ ಪಾಯಿಂಟ್‍ಗಳಷ್ಟು ಜಾಸ್ತಿಯಾಗತೊಡಗಿತು. ಅಲ್ಲಿಯವರೆಗೆ ಕನಿಷ್ಟ ಮಾತಾಡುತ್ತಿದ್ದ ಆಕೆಯ ದನಿ ಕೊಂಚ ಕೊಂಚ ಕ್ಷೀಣಾವಾಗತೊಡಗಿತು.
ನಮಗೆ ಮತ್ತೆ ಭಯವಾಗತೊಡಗಿತು
ಮತ್ತೊಮ್ಮೆ ಪರಿಮಳಾರ ಬಳಿ ಕರೆದೊಯ್ದೆವು.
ಅಡ್ಮಿಟ್ ಮಾಡುವುದಾದರೆ ಮಾಡಿರಿ ಎಂದಾಗ ನೀವು ಹೆದರುತ್ತೀರಾ ಎಂದು ಮಾಡಬೇಕಷ್ಟೆ ಇಲ್ಲವಾದಲ್ಲಿ ಯಾವ ತೊಂದರೆಯೂ ಇಲ್ಲ ಎಂದು ಹೇಳಿದರು . ಅಷ್ಟ್ರಲ್ಲಿ ಅವಳ ಬ್ಲಡ್ ರಿಪೋರ್ಟ್ ಬಂದಿತ್ತು ಯಾವ ತೊಂದರೆಯೂ ಇಲ್ಲ ಎಂದು ಹೇಳಿದರು.
ಮಗು ಸುಸ್ತಾಗಿರುವುದರಿಂದ ಹತ್ತಿರದ ಯಾವುದಾದರೂ ಹಾಸ್ಪಿಟಲ್‌ನ್ಅಲ್ಲಿ ಐವಿ ಫ್ಲುಯೆಡ್ಸ್ ಹಾಕಿಸಿ ಎಂದು ಹೇಳಿದರು
ಮತ್ತೆ ಮಗುವನ್ನು ಮನೆಯ ಬಳಿ ಇರುವ ಅಪಲೋ ಹಾಸ್ಪಿಟಲ್ ‍ಗೆ ಕರೆದೊಯ್ದು ಐವಿ ಫ್ಲುಯೆಡ್ಸ್ ಹಾಕಿಸಲು ಕರೆದುಕೊಂಡು ಬಂದೆವು
ಅಲ್ಲಿಯ ನರ್ಸ್ಗಳಿಗೆ ಮಗುವಿನ್ ನರ ಸಿಗಲಿಲ್ಲ ಸುಮಾರು ಐದಾರು ಕಡೆ ಚುಚ್ಚಿದರೂ ಪ್ರಯೋಜನವಾಗಲಿಲ್ಲ. ಯಾವೊಬ್ಬ ನರ್ಸ್‌ಗೂ ಡಾಕ್ಟರ್‌ಗೂ ಆ ಸಾಮರ್ಥ ಇರಲಿಲ್ಲ. ಮಗು ಪೂರ ಸುಸ್ತಾಗಿತ್ತು. ಅವಳೇನೋ ಹೇಳುತ್ತಿದ್ದಾಳೋ ಯಾವುದೂ ತಿಳಿಯಲಿಲ್ಲ. ಕೊನೆಗೆ ಹಾಸ್ಪಿಟಲ್ನವರು ಮೈನ್ ಹಾಸ್ಪಿಟಲ್‌ಗೆ ಕಳಿಸೋಣ ಎಂದಾಗ ನಾವು ಒಪ್ಪಲಿಲ್ಲ ಅಲ್ಲಿಂದ ಸುಮಾರು ಮುಕ್ಕಾಲು ಘಂಟೆ ಪ್ರಯಾಣ ಅಪಲೋ ಮೇನ್ ಹಾಸ್ಪಿಟಲ್ಗೆ
ಕೊನೆಗೆ ಇವರು ನಿರ್ಧರಿಸಿ ಮತ್ತೆ ನಾರಾಯಣಕ್ಜ್ಕೆ ಬರುತ್ತಿದ್ದಂತೆ ಮಗು ಇದ್ದಕಿದಂತೆ ಬೆಚ್ಚಿತು. ಅದರ ಕೈ ಕಾಲುಗಳು ಅದುರಲಾರಂಭಿಸಿತು ಕಣ್ಣುಗಳು ಮೇಲುಗಣ್ಣಾದವು. ನನಗೆ ಶಾಕ್ ಕಾರ್ ನಿಲ್ಲಿಸಿ ಅಳಲಾರಂಭಿಸಿದೆ . ಅಬ್ಬಾ ಅಂಥಾ ಘಳಿಗೆ ಮತ್ತೆ ನೋಡುವುದೂ ಬೇಡ ಅಂಥ ಕರ್ಮ. ನನ್ನ ಯಾವ ಜನ್ಮದ ಪಾಪವೊ ನನ್ನ ಮಗಳಿಗೆ ತಾಕಿದೆ ಎಂದನಿಸಿತು. ಇವರು ರಾಘವೆಂದ್ರರನ್ನು ಬೇಡಿಕೊಂಡರು .ನಾನು ಹಣೇ ಹಣೆ ಬಡಿದುಕೊಳ್ಳಲಾರಂಭಿಸಿದೆ. ಮಗು ನಿಸ್ತೇಜಗೊಳ್ಳಲಾರಂಭಿಸಿತು
ಆಗಲೇ ಇದು ಫಿಟ್ಸ್‌ನ ಲಕ್ಷ್ಬಣವಿರಬಹುದು ಎಂದನಿಸಿ ಕೈನಲಿದ್ದ ಕೀಯನ್ನು ಯಶಿತಾ ಕೈಗೆಕೊಟ್ಟೆ. ಹಾಗೆ ಸ್ವಲ್ಪಹೊತ್ತಿನಲಿ ನನ್ನ ಮೇಲೊರಗಿದಳು. ಉಸಿರಾಡುತ್ತಿದ್ದಳಷ್ಟೆ ಮತ್ತಿನಾವ ಚಲನೆಯೂ ಇಲ್ಲ.
ಅಲ್ಲಿಂದ ನಾರಾಯಣಕ್ಕೆ ಬಂದು ಆಂಕಾಲಜಿ ಕಟ್ಟಡಕ್ಕೆ ಕರೆದುಕೊಂಡು ಬಂದೆವು.
ಅಲ್ಲಿಂದ ಐಸಿಯುಗೆ ಕೂಡಲೆ ಅಡ್ಮಿಟ್ ಮಾಡಿದರು . ಆ ಸಂದರ್ಭದಲ್ಲು ಹಣದ ಬಗ್ಗೆ ಮಾತಾಡುತ್ತಿದ್ದ ಡಾಕ್ಟರ್‌ಗೆ ನಮ್ಮ ಮನೆಯವರು ಬೈದರು. ನನಗೆ ನನ್ನ ಮಗಳು ಮುಖ್ಯ. ಇನ್ಸೂರೆನ್ಸ್ ಇರಲಿ ಇಲ್ಲದಿರಲಿ ಲಕ್ಶವಾಗಲಿ. ಐಯಾಮ್ ರೆಡಿ ಟು ಪೇ ಪ್ಲೀಸ್ ಆಡ್ಮಿಟ್ ಹರ್ ಎಂದೇ ಕಿರುಚಿದರು
ನಾನು ನನ್ನ ಮಗುವನ್ನು ಬದುಕಿಸಿಕೊಡಿ ಎಂದು ಮಾತ್ರ ಬೇಡಿಕೊಳ್ಳುತ್ತಿದ್ದೆ ಮತ್ತಾವ ವಿಷಯವೂ ತಲೆಗೆ ಹೋಗಲಿಲ್ಲ. ಮಗುವನ್ನು ಐಸಿಯುನಲ್ಲಿ ಇರಿಸಿದರು ಅಂದು ಪೂರ್ತಿ ಅಲ್ಲೇ ಇದ್ದಳು.
ಒಂದುವಾರ ಆಸ್ಪತ್ರೆಯಲ್ಲೇ ಇದ್ದೆವು. ವಾರದ ನಂತರ ಡಿಸ್ಚಾರ್ಜ್ ಆಯ್ತು
ದೇವರ ದಯದಿಂದ ಯಶಿತಾ ಈಗ ಹುಷಾರಾಗಿದ್ದಾಳೆ . ನೆನ್ನೆಯಿಂದ ಮತ್ತೆ ಸ್ಕೂಲಿಗೆ ಹೋಗುತ್ತಿದ್ದಾಳೆ. ಹೋದವಾರವೇ ಈ ಬಗ್ಗೆ ಬರೆಯೋಣ ಎಂದನಿಸಿದರೂ ಮಗು ಮೊದಲು ಪೂರ್ಣ ಗುಣವಾಗಲಿ ಎಂದು ಸುಮ್ಮನಿದ್ದೆ
ಈ ಸಮಯದಲ್ಲಿ ಮಗುವಿನ ಆರೋಗ್ಯದ ಬಗ್ಗೆ ವಿಚಾರಿಸಿದ ಸಂಪದ ಮಿತ್ರರೆಲ್ಲಾರಿಗೂ ನನ್ನ ವಂದನೆಗಳು

Tuesday, June 23, 2009

ಮಗುವಿನ ಪ್ರಶ್ನೆಗೆ ಉತ್ತರಿಸಲು ಸಹಾಯ ಮಾಡ್ತೀರಾ

December 28, 2008 - 10:03am bAREDADDU
ನನ್ನ ಮಗಳು ಬೆಳೆಯುತ್ತಿದ್ದಾಳೆ . ಹಾಗೆ ಅವಳ ಕುತೂಹಲ, ಎಲ್ಲವನ್ನೂ ತಿಳಿಯಬೇಕೆಂಬ ಹಂಬಲವೂ.ಕೆಲವೊಮ್ಮೆ ಅವಳು ಕೇಳಿವ ಪ್ರಶ್ನೆಗಳಿಗೆ ನಾನು ಉತ್ತರಿಸುವ ರೀತಿ ಅವಳಿಗೆ ಅರ್ಥವೇ ಆಗೋದಿಲ್ಲಒಂದಷ್ಟು ಪ್ರಶ್ನ್ಗೆಗಳು
ನಲ್ಲಿಯಿಂದ ನೀರು ಯಾಕೆ ಕೆಳಗೆ ಬೀಳುತ್ತದೆ ಯಾಕೆ ಮೇಲೆ ಹೋಗೋದಿಲ್ಲ.ನನ್ನ ಉತ್ತರ ಗಾಳಿಯ ಮೇಲಿಂದ ನೂಕುತ್ತೆ , (ಅವಳಿಗೆ ಈ ಗ್ರಾವಿಟಿ ಅದೂ ಇದೂ ಅಂದ್ರೆ ಅರ್ಥ ಆಗಲ್ಲ)ಅವಳು ಗಾಳಿ ಯಾಕೆ ಮೇಲಿಂದ ನೂಕುತ್ತೆ?ನಾನು ಗಾಳಿ ಮೇಲಿಂದ ಬರುತ್ತೆ?ಅವಳು "ಗಾಳಿ ಯಾಕೆ ಮೇಲಿಂದ ಬರುತ್ತೆ, ಯಾಕೆ ಕೆಳಗೆ ಇರಲ್ಲ"ನಾನು " ಚಿನ್ನಿ ಬಾ ನಿಂಗೆ ಚಾಕ್ಲೇಟ್ ಕೊಡಿಸ್ತೀನಿ"
ಮತ್ತೊಂದು ಪ್ರಶ್ನೆ"ಮಾಮೀನ(ದೇವರನ್ನ್ ) ಯಾಕೆ ಕೂಡಹಾಕ್ತಾರೆ""ಇಲ್ಲ ಚಿನ್ನು ಕೂಡಹಾಕಲ್ಲ , ಬಾಗ್ಲು ಹಾಕೋದಷ್ಶ್ಟೆ""ಯಾಕೆ ಪೂಜೆ ಮಾಡ್ತೀಯಾ""ಮಾಮಿ ಒಳ್ಲೇದು ಮಾಡು ಅಂತ""ಅದು ಸುಮ್ಮನೆ ಕೂತಿರುತ್ತೆ ಮಾತೇ ಆಡಲ್ಲ, ?""ಮಾಮಿ ಯಾವಾಗ್ಲ್ಲೊ ನಾವೇನು ಮಾಡ್ತೀವೋ ನೋಡುತ್ತೆ ಹೊರತು ಮಾತಾಡಲ್ಲ""ಮತ್ಯಾಕೆ ಮಾಮಿ ಬಯ್ಯುತ್ತೆ ಅಂತೀಯಾ"ನಿರುತ್ತರ
ಮೊನ್ನೆ ನಾಯಿಮರಿ ಕರ್ಕೊಂಡು ಬಂದಳು"ಅಮ್ಮ ಈ ಪಾಪು ಮಾತಾಡೋದೆ ಇಲ್ಲ""ಇಲ್ಲ ಅದು ಬೊವ್ ಬೊವ್ ಅಂತ ಮಾತಾಡುತ್ತೆ""ನಮ್ತ್ರರ ಯಾಕೆ ಮಾತಾಡಲ್ಲ""ಅದಕ್ಕೆ ಮಾಮಿ ಮಾತಾಡೋಕೆ ಹೇಳ್ಕೊಟ್ಟಿಲ್ಲ""ಮಾಮಿ ಕೆಟ್ಟದಮ"ನಿರುತ್ತರ
ಕೃಷ್ಣ ನೋಡುತ್ತಿದ್ದಳು"ಕಿಟ್ಟ ಮಾಮಿ ಯಾಕಮ್ಮ ಎಲ್ಲ್ರನ್ನೂ ಸಾಯ್ಸುತ್ತೆ?""ಎಲ್ರನ್ನೂ ಅಲ್ಲ ಪುಟ್ಟ ಕೆಟ್ಟವರನ್ನು ಮಾತ್ರ ಸಾಯ್ಸುತ್ತೆ""ಮತ್ತೆ ಅವಾಗಿಂದ ಬರೀ ಸಾಯ್ಸ್ಸಾನೆ ಇದೆ, ತುಂಬಾ ಜನ ಕೆಟ್ಟವರೇನಾ""ಹೌದು ಪುಟ್ಟ . ಅದಕ್ಕೆ ಒಳ್ಳೆಯವರನ್ನ ಉಳಿಸ್ಬೇಕಲ್ಲ ಅದಕ್ಕೆ""ಮಾಮೀ ಯಾಕೆ ಎಲ್ರನ್ನು ಒಳ್ಳೇಯವರನ್ನ ಮಾಡ್ಬಾರದು?"ನಿರುತ್ತರ.
ಚಂದಾಮಾಮ ಯಾಕೆ ಮೇಲೆ ಇರುತ್ತೆ ಕೆಳಗೆ ಯಾಕೆ ಬರಲ್ಲದೊಡ್ಡವರು ಯಾಕೆ ಬಾಲ್ಕನಿಯಿಂದ ಕೆಳಗೆ ನೋಡೋಕಾಗತ್ತೆ ನಮಗ್ಯಾಕೆ ಅಗಲ್ಲಎಲಿಫ್ಯಾಂಟಗ್ಯಾಕೆ ಸೊಂಡಿಲಿರುತ್ತೆ ನಮಗ್ಯಾಕೆ ಇರಲ್ಲನಾಯಿಗ್ಯಾಕೆ ಬಾಲ ಇದೆ ನಮಗ್ಯಾಕೆ ಇಲ್ಲ
ಹೀಗೆ ಅವಳ ಪ್ರಶ್ನೆಗಳಿಗೆ ಅವಳದೇ ಬಾಲ ಭಾಷೆಯಲ್ಲಿ ಉತ್ತರಿಸುವುದಕ್ಕೆ ಹರಸಾಹಸ ಮಾಡಬೇಕಾಗುತ್ತೆ
ಮೊನ್ನೆ ಅವಳ ಅಕ್ಕ(ನನ್ನ ಅಕ್ಕನ ಮಗಳು )ನೊಡನೆ ಹೇಳುತ್ತಿದ್ದಳುಅಮ್ಮ ದೊಡ್ಡವಳು ಅಂತಾಳೆ. ಅವಳಿಗೆ ಏನೂ ಗೊತ್ತಿಲ್ಲಕ್ಕ
ನಂಗೆ ಹೆಂಗಾಗಿರಬೇಡ ಹೇಳಿ
ಹಾಗಾಗಿ ಬಾಲ ಭಾಷೆಯಲ್ಲಿ ಉತ್ತರ ಹೇಳಿ ಸುಮ್ಮನಾಗಿಸೋದು ಹೇಗೆ ಅಂತ ಹೇಳ್ತೀರಾ
January 12, 2009 - 2:01pm baredaddu
ನೆನ್ನೆ ಭಾನುವಾರ ನನ್ನ ಮಗಳಿಗೆ ಡ್ಯಾನ್ಸ್ ಹೇಳಿಕೊಡ್ತಿದ್ದೆ, ಅವಳ ಸ್ಟೆಪ್ಸ್ ಸರಿಯಾಗಿ ಬರ್ತಾ ಇಲ್ಲ ಅಂತನ್ನಿಸಿ ಒಂದೆರೆಡು ಬಾರಿ ಹೇಳಿಕೊಟ್ಟೆ , ಕೊನೆಗೆ ಬೈದೆ. ಒಂದು ಹೊಡೆದೂ ಹೊಡೆದೆ.ಅವಳು ಅದೇ ತಾಳ ಅದೇ ರಾಗ
ಕೊನೆಗೆ " ನೋಡು ಹೀಗೆ ಮಾಡಿದರೆ ಪುಷ್ಪ(ಕೆಲಸದ ಹುಡುಗಿ)ಗೆ ಹೇಳಿಕೊಡ್ತೀನಿ " ಎಂದು ಹೆದರಿಸುತ್ತಿದೆ
" ನೋಡಜ್ಜಿ ಪುಷ್ಪಾಗೆ ಹೇಳಿಕೊಡ್ತಾಳಂತೆ " ಎಂದು ಅಳಲು ಶುರು ಮಾಡಿದಳು,
ನನ್ನ ತಾಯಿಗೆ ಅದೇನು ಬಂತೋ ಕೋಪ" ಮೂರು ವರ್ಷದ ಆ ಮಗು ಮತ್ತ್ತೆ ಹದಿನಾರು ವರ್ಷದ ಆ ಹುಡುಗಿ ಇಬ್ರೂ ಒಂದೇನಾ, ಏನು ಆ ಮಗೂನ ಅಷ್ಟೊಂದು ಗೋಳ್ ಹಾಕೋತೀಯಾ " ಅಂತ ಬೈದರು
ಸರಿ ಆ ಕೋಪಾನೆಲ್ಲಾ ಮಗಳ ಮೇಲೆ ಬಿಟ್ಟು"ನೀನು ಡ್ಯಾನ್ಸ್ ಕಲಿಯೋವರೆಗೆ ನನ್ನ ಹತ್ತಿರ ಬರ್ಬೇಡ ಅಂತ ಎಚ್ಚರಿಸಿದೆ
ಅವಳು " ಹೋಗು ನೀನು ಕೆಟ್ಟ ಅಮ್ಮ , ನಾನು ಬೇರೆ ಅಮ್ಮನ್ನ ಕರ್ಕೊಂಬರ್ತೀನಿ, ಆ ಅಮ್ಮ ನಂಗೆ ಹೊಡೆಯಲ್ಲ ಬಡಿಯಲ್ಲ , ಮುದ್ದು ಮಾಡ್ತಾಳೆ, " ಅಂತ ತಿರುಗುಬಾಣ ಬಿಟ್ಟಳು" ಆಯ್ತು ನಾನು ಇನ್ಮೇಲೆ ನಿನ್ನ ಹತ್ತಿರ ಮಾತಾಡಲ್ಲ ಸರಿ ನೋಡೋಣ ನೀನೆ ಬರ್ತೀಯಾ ಇಲ್ಲವಾ "ಅಂದೆ
"ನೋಡೋಣ ಹೋಗು " ಎಂದಳುಅರ್ಧಘಂಟೆಯಾಯಿತು, ನಾನು ಮಾತಾಡಲಿಲ್ಲ .
ಅವಳೂ ಅಷ್ಟೆ
ಸ್ನಾನ ಮುಗಿಸಿಕೊಂಡು ಹೊರಗೆ ಬಂದೆ. ರೂಮ್ ಬಾಗಿಲ ಹತ್ತಿರ ಬಂದು ನಿಂತಳುಕನ್ನಡಿಯಲ್ಲಿ ನೋಡಿಯೂ ಸುಮ್ಮನಾದೆ.
ದೊಡ್ಡ ಟೆಡ್ಡಿ ಬೇರ್ ಇದೆ ಅದನ್ನ ತಗೊಂಡು ಬಂದು.
" ನೋಡು ಇದು ನಮ್ಮಮ್ಮ " ಎಂದು ಮುದ್ದಾಡುತ್ತಿದ್ದಳು ನಾನು " ನೀನ್ ನನ ಹತ್ರ ಮಾತಾಡ್ಬೇಡ ಹೋಗು ಎಂದು ಮುಖ ತಿರುಗಿಸಿದೆ
ಅಜ್ಜಿಯ ರೂಮಿಗೆ ಓಡಿ ಹೋದಳು . ಸ್ವಲ್ಪ ಹೊತ್ತು ಅಜ್ಜಿ ಮೊಮ್ಮಗಳ ಮಾತು ಮುದ್ದು ನಡೆಯುತ್ತಿತ್ತು ನಾನು ಹಾಗೆ ಕದ್ದು ನೋಡುತ್ತಿದ್ದೆ. ಅದನ್ನು ಗಮನಿಸಿದಳೋ ಏನೋ
ಮತ್ತೆ ಅಜ್ಜಿಯ ರೂಮಿನಿಂದ ಪಿಳಿ ಪಿಳಿ ಕಣ್ಣು ಬಿಡುತ್ತಾ ಸ್ವಲ್ಪ ಹೊತ್ತು ನನ್ನನ್ನೇ ನೋಡುತ್ತಿದ್ದಳು ನನಗೆ ನಗು ತಡೆಯಲ್ಲಾಗುತ್ತಿರಲಿಲ್ಲ ಆದರೂ ಸಿಟ್ಟಿರುವಳಂತೆ ಮುಖ ಬಿಗಿದುಕೊಂಡೆ ಕೂತಿದ್ದೆ
ಕೊನೆಗೆ ಅವಳೇ ಬಂದು ನನ್ನ ಮುಂದೆ ನಿಂತಳು. ನನ್ನ ಮುಖವನ್ನೇ ದಿಟ್ಟಿಸಿ ನೋಡುತ್ತಾ ಮುದ್ದು ಮುದ್ದಾಗಿ ಮೂತಿ ತಿರುಗಿಸಿದಳು, ನಕ್ಕಳು
ಗಮನಿಸದವಳಂತೆ ಕೂತೆ ಇದ್ದೆ
ಕೊನೆಗೆ ಟಿವಿ ನೋಡಲೆಂದು ಕೂತಿದ್ದ ನನ್ನ ಮೇಲೆ ಹತ್ತೇ ಬಿಟ್ಟಳುಇದುವರೆಗೂ ತಡೆ ಹಿಡಿದ್ದಿದ್ದ ಪ್ರೀತಿ ಕಟ್ಟೆಯೊಡೆದಿತ್ತು
ಅವಳನ್ನು ಅಪ್ಪಿ ಹಿಡಿದು ಮುದ್ದಿಸಿದೆ

Saturday, April 11, 2009

ಸಿಂಡ್ರೆಲಾ ಸಿಂಡ್ರೆಲಾ

ಆಗ ತಾನೆ ಹೊಸ ಬಟ್ಟೆ ತಂದಿದ್ದೆ. ಕೂಡಲೆ ಹಾಕು ಹಾಕು ಎಂದು ದುಂಬಾಲು ಬಿದ್ದಳು. ಆತ ತೆಗೆದ ಫೋಟೋ ಇದು

ನಿದ್ದೇಲೂ ಸ್ಟೈಲಾ?

ಯಶು ಮಲಗಿದ್ದಳು. ಏನೋಓದುತ್ತಿದ್ದ ನಾನು ಅವಳತ್ತ ದೃಷ್ಟಿ ಹಾಯಿಸಿದೆ . ಮನದುಂಬಿ ಬಂತು ಮಲಗಿರುವಾಗಲೂ ಸ್ಟೈಲಾ ಅನ್ನಿಸಿತು
ಕೂಡಲೆ ಕ್ಯಾಮೆರಾ ಎತ್ತಿ ಆ ಘಳಿಗೆಯನ್ನ ಸೆರೆ ಹಿಡಿದೆ

Friday, April 3, 2009

ಚಂದಿರನೇಕೆ ಮೇಲಿಹನಮ್ಮ

ಹೀಗೆ ನನ್ನ ಮಗಳು
ಸ್ವಲ್ಪ ತಲೆ ತಿನ್ನೋದು ಜಾಸ್ತಿ
ಒಮ್ಮೊಮ್ಮೆ ಪ್ರಶ್ನೆ ಕೇಳ್ತಾಳೆ ಅಂದ್ರೆ ಒಂದು ನಾವು ಗೊತ್ತಿಲ್ಲ ಅಂತ ಸುಮ್ನಾಗಬೇಕು ಇಲ್ಲ ಅಂದ್ರೆ ಬೈಯ್ಯಬೇಕು
ಹೀಗೆ ಅವಳು ಕೇಳಿದ ಪ್ರಶ್ನೆ
ಚಂದಮಾಮ ಯಾಕೆ ಮೇಲಿದಾನೆ
ಅದಕ್ಕೊಂದು ಕತೆ ಕಟ್ಟಲೇ ಬೇಕಿತ್ತು
ಕತೆ ಶುರು ಮಾಡಿದೆ
ನಾನು ಚಂದಮಾಮ ಮೊದಲೆಲ್ಲಾ ಭೂಮಿ ಮೇಲೆ ಬರ್ತಾ ಇದ್ದ"
ಅವಳು "ಯಾಕೆ ಭೂಮಿ ಮೇಲೆ ಬರ್ತಾ ಇದ್ದ?"
ನಾನು"ಅವನು ನಿನ್ನ ಥರಾನೆ ಆಟ ಆಡ್ತಿದ್ದನಲ ಅದಕ್ಕೆ"
ಅವಳು "ಭೂಮಿ ಎಲ್ಲಿದೆ?"
ನಾನು "ನಾವು ನಿಂತಿರೋದೇ ಭೂಮಿ ಮೇಲೆ"
ಅವಳು" ಅಮ್ಮ ನಾನು ಸೋಫಾ ಮೇಲೆ ಕೂತಿರೋದು"
ನಾನು"ನಾನು ನೆಲದಮೇಲೆ ನಿಂತಿದೀನಲ್ಲ! ಅದೇ ನೆಲ ಭೂಮಿ"
ಅವಳು (ಮೌನ)ಸ್ವಲ್ಪ ಹೊತ್ತು "ಆಮೇಲೆ?"
ನಾನು" ಚಂದಮಾಮ ಯಾವಾಗ್ಲೂ ಆಟ ಆಡ್ತಾ ಇದ್ದಾಗ ಒಂದು ಅಜ್ಜಿ ನೋಡ್ತು"
ಅವಳು"ಯಾವ ಅಜ್ಜಿ ನಮ್ಮಜ್ಜಿನಾ?"
ನಾನು"ಅಲ್ಲ ಅದು ಕೆಟ್ಟಜ್ಜಿ"
ಅವಳು "ಸರಿ ಆಮೇಲೆ"
ನಾನು "ಆ ಅಜ್ಜಿಗೆ ಚಂದಾಮಾಮ ತುಂಬಾ ಇಷ್ಟ ಆಗಿಬಿಡ್ತಾನೆ"
ಅವಳು"ಯಾವ ಅಜ್ಜಿ?"
ನಾನು "ಅದೇ ಕೆಟ್ಟ ಅಜ್ಜಿ"
ಅವಳು"ಆಮೇಲೆ"
ನಾನು" ಚಂದಮಾಮನ್ನ ಎತ್ಕೊಂಡು ಅವಳ ಮನೆಗೆ ಹೋಗಿಬಿಡ್ತಾಳೆ"
ಅವಳು"ಚಂದಾಮಾಮ ಅಳಲ್ವಾ?"
ನಾನು" ಚಂದಾಮಾಮ ಅತ್ತರೂ ಅಜ್ಜಿ ಕೇಳೋದಿಲ್ಲ. ಚಂದಾಮಾಮನ್ನ ಒಂದು ಮನೇಲಿ ಕೂಡು ಹಾಕಿ ನನ್ನ ಜೊತೆ ಆಟ ಆಡು ಆಡು ಅಂತ ಗೋಳ್ಹಾಕ್ಕೋತಾಳೆ"
ಅವಳು"ನಂಥರಾನ?"
ನಾನು"ಹೂ ನಿನ್ನ ಥರಾನೆ ಚಂದಮಾಮ ಅಳ್ತಾ ಇರುತ್ತೆ .ಅಜ್ಜಿ ನನ್ನ ಮನೆಗೆ ಕಳ್ಸು ಅಲ್ಲಿ ಅಮ್ಮ ಅಪ್ಪ ಎಲ್ಲಾ ಕಾಯ್ತಾ ಇರ್ತಾರೆ"
(ಯಶಿತಾಗೆ ಕತೆಯ ಪಾತ್ರವೇ ತಾನಾಗುವ ಆಸೆ. ಕತೆಗೆ ಮತ್ತಷು ಸೇರಿಸ್ತಾಳೆ)
ಅವಳು"ಹೂ ಅಕ್ಕ(ನನ್ನಕ್ಕನ ಮಗಳು), ದೊಡ್ಡಮ್ಮ(ನನ್ನಕ್ಕ)ದೊಡ್ಡಪ್ಪ,ಅಜ್ಜಿ ಪುಷ್ಪ(ನಮ್ಮ ಮನೆಯಕೆಲಸದ ಹುಡುಗಿ) ಎಲ್ಲಾ ಕಾಯ್ತಾ ಇರ್ತಾರೆ "
(ಅವಳು ಹಾಗೆ ಹೇಳ್ವಾಗ ಕೇಳಿಸಿಕೊಳ್ಳಬೇಕು . ಪ್ರೀತಿ ಉಕ್ಕಿಹರಿಯುತ್ತದೆ ನೋಡುವವರ ಮನದಲ್ಲಿ . ತೊದಲು ಮಾತಿನಲ್ಲಿ ತಲೆ ಆಡಿಸಿಕೊಂಡು, ಎಲ್ಲರನ್ನ ನೆನಪಿಸಿಕೊಂಡು ಹೇಳುವ ರೀತಿ ವಾವ್ ಖುಶಿ ಕೊಡುತ್ತೆ)
ನಾನು"ಹೂ ಕಣೋ . ಯಾವಾಗ್ಲೂ ಚಂದಮಾಮ ಅಳ್ತಾ ಇರ್ತಿತ್ತು . ನಾನುಮನೆಗೆ ಹೋಗ್ಬೇಕೂ ಹೊಗ್ಬೇಕೂ "ಅಂತ
ಅವಳು"ಪಾಪ ಅಲ್ವಾಮ ಚಂದಮಾಮ ಆ ಅಜ್ಜೀನ ಹೊಡೆದುಬಿಡ್ಬೇಕು" ಹಾಗಂದು ಹೊಡೀತಾಳೆ ನನಗೇ
ನಾನು "ಆಮೇಲೆ ಒಂದಿನ ಅಜ್ಜಿ ಮಮ್ಮು ತರೋದಿಕ್ಕೆ ಸಿಟಿಗೆ ಹೋಗ್ತಾಳೆ"
ಅವಳು"ಯಾಕೆ ಅವಳು ಅಡಿಗೆ ಮಾಡಲ್ವಾ?"
ನಾನು" ಇಲ್ಲ ಪುಟ್ಟಿ ಅವಳು ಹೋಟೆಲ್‍ನಿಂದ ತರ್ತಾಳೆ"
ಅವಳು"ಯಾವ ಹೋಟೆಲ್?"
ನಾನು ಉತ್ತರಕ್ಕಾಗಿ ತಡಕಾಡೋಷ್ಟ್ರಲ್ಲಿ ಅವಳೇ
"ಭಾಗ್ಯಸಾಗರ್ ಹೋಟೆಲಾ?"
ನಾನು "ಹೌದು ಆಗ ಒಂದುಹೆಲಿಕ್ಯಾಪ್ಟರ್ ಬರುತ್ತೆ"
"ಜೂಯ್ ಅಂತ ಬರುತ್ತಾ?"ಆಕ್ಟ್ ಮಾಡಿ ತೋರಿಸಿದಳು
ನಾನು "ಹೂ ಚಿನ್ನ ಆಗ ಚಂದಮಾಮ ಹೆಲ್ಪ್ ಹೆಲ್ಪ್ ಅಂತ ಕಿರುಚಿಕೊಳ್ತಾನೆ, ಆಗ ಹೆಲಿಕಾಫ್ಟರ್ ಬಂದು ಅವನ್ನ ಕರ್ಕೊಂಡು ಸೀದಾ ಆಕಾಶದಲ್ಲಿ ಹಾಕಿಬಿಡುತ್ತೆ"
ಅವಳು"ಆಮೇಲೆ ಅಜ್ಜಿ ಏನ್ಮಾಡ್ತಾಳೆ?"
ನಾನು"ಅಜ್ಜಿ ಬಂದು ಚಿನ್ನು ಬಾರೋ ನಿಂಗೆ ಮಮ್ಮು ಕೊಡ್ತೀನಿ, ಗಿಳಿಮರಿ ಕೊಡ್ತೀನಿ" ನಾನಷ್ಟೇ ಹೇಳೋದು
ಇನ್ನುಮಿಕ್ಕಿದ ಡಿಮ್ಯಾಂಡೆಲ್ಲಾ ಅವಳದೇ
ಅವಳು"ನಿಂಗೆ ಐಸ್ ಕ್ರೀಮ್ ಕೊಡಿಸ್ತೀನಿ, ಚಾಕಲೇಟ್ ಕೊಡಿಸ್ತೀನಿ, ಕೇಕ್ ಕೊಡಿಸ್ತೀನಿ "(ಫುಲ್ ಸ್ಟಾಪೇ ಇಲ್ಲ)
ನಾನೇ"ಹೀಗೆಲ್ಲಾ ಹೇಳಿದ್ರೂ ಚಂದಮಾಮ ಬರೋದಿಲ್ಲ . ನಾನು ಬರಲ್ಲ ಅಂತಹೇಳಿ ಅಲ್ಲೇ ಇದ್ದುಬಿಡುತ್ತೆ"
ಈ ಕತೆಯನ್ನ ದಿನಾಮಲಗುವಾಗಲೆಲ್ಲಾ ಕೇಳಿಸಿಕೊಂಡೆ ಅವಳು ಮಲಗೋದು
ಹೀಗೆ ವಿಚಿತ್ರ ಚಿತ್ರ ಕತೆಗಳನ್ನ ಹೇಳ್ತಾ ಇರ್ತೀನಿ.
ಅವಳು ಕೇಳ್ತಾ ಇರ್ತಾಳೆ"

Monday, March 16, 2009

ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿ ಮನೆಗೆ ಬಂದ ನಂತರ ಒಂದು ರೂಮು ನಾನು ನನ್ನ ಮಗಳು ಸದಾ ಜೊತೆಗಿರುತ್ತಿದ್ದೆವು
ಒಂದು ರೀತಿಯಲ್ಲಿ ತಾಯಿ ಮಗು ಸಂಭಂಧ ಇನ್ನಷ್ಟು ಗಟ್ಟಿಯಾಗಲೆಂದು ಈ ರೀತಿ ಕೂಡಿ ಹಾಕುತ್ತಾರೆಂದು ಅನಿಸುತ್ತದೆ.
ಆ ದಿನಗಳಲ್ಲಿ ನನ್ನ ಹಾಗು ನನ್ನ ಮಗಳ ಭಾಂಧವ್ಯ ಬೆಳೆಯತೊಡಗಿತು
ಸದಾ ನನ್ನ ಜೊತೆಮಲಗಿ ಅವಳಿಗೆ ನನ್ನ ಮೈ ಶಾಖದ ಪರಿಚಯವಾಗತೊಡಗಿತೇನೋ . ನಾನು ಒಂದು ವೇಳೆ ಅವಳ ಮೇಲಿನಿಂದ ಕೈ ತೆಗೆದರೆ ಸಾಕು ಅಳುತ್ತಿದ್ದಳು.
ಅಬ್ಬಾ ಅದೆಷ್ಟು ಅಧಿಕಾರ ಅವಳಿಗೆ ನನ್ನ ಮೇಲೆ .ಇನ್ನೂ ಭೂಮಿಗೆ ಬಂದು ಆರು ದಿನವೂ ಕಳೆದಿಲ್ಲ ಎಂದೆನಿಸುತ್ತಿತ್ತು.
ಜೊತೆಗೆ ಹಸಿವಾದಾಗಲೆಲ್ಲ ನನ್ನೆಡೆಗೆ ತಿರುಗಬೇಕೆಂಬ ಅವಳ ಬುದ್ದಿಗೆ ನಿಜಕ್ಕೂ ಆಶ್ಚರ್ಯವಾಗುತ್ತಿತ್ತು
ಹಾಲುಗಲ, ಪುಟ್ಟ ಪುಟ್ಟ ತುಟಿಗಳು.ಮೊದಲನೆ ದಿನ ಇದ್ದ ಬಣ್ಣ ಈಗ ಬಿಳುಪಾಗಿ ಬದಲಾಗಿತ್ತು. ಅವಳು ಬೆಳೆಯುತ್ತಿದ್ದಂತೆಲ್ಲಾ ಅವಳ ರೂಪವೂ ಇನ್ನು ಮುದ್ದಾಗುತ್ತಿತ್ತು.
"ಪ್ರೀತಿ ಲೋಕದ ಸೂರ್ಯ ನೀನು, ಮೇಘರಾಜನ ಚಂದ್ರ ನೀನು
ಬಾರೆ ಕಂದ ನೀನೆ ನಮ್ಮ ಬಾಳ ಬೆಳಕು"
ಚಲನ ಚಿತ್ರದ ಹಾಡನ್ನ್ ಹಾಡೋದೆ ಕೆಲಸವಾಗಿತ್ತು ನನಗೆ(ಮಾಡಲು ತಾನೆ ಇನ್ನೇನಿತ್ತು?)

ಮಗುವಿಗೆ ಯಾವ ಹೆಸರಿಡಬೇಕೆಂಬ ಪ್ರಶ್ನೆ ಉದಿಸಿತು
ಈ ಸಮಯದಲ್ಲಿ ಕಂಪ್ಯೂಟರ್ ನೋಡಬಾರದು ಎಂದರೂ ಕೇಳದೆ ಗೂಗಲ್ ಮಾಡಿ ಮಾಡಿ ಅವಳಿಗೆ ಹೆಸರನ್ನು
ಆರಿಸಿದೆ.
ಹನ್ನೊಂದನೇ ದಿನ ಅವಳಿಗೆ ನಾಮಕರಣ ಮಾಡುವ ದಿನ
ಅವಳಿಗೆ ತಲೆಗೆ ಎರೆದರು
ಮಗುವಿಗೆ ಎರೆಯುವ ಕೆಲಸವೇ ಒಂದು ದೊಡ್ಡ ಕಲೆಯಾಗಿತ್ತು.
ಆ ನೀರಿನ ಹಿತವಾದ ಬಿಸಿಗೋ ಏನೋ ಹಾಲು ಕುಡಿದು ನಿದ್ರಿಸಿದ ಮಗು ರಾತ್ರಿಯವರೆಗೆ ಎಚ್ಚರವಾಗಲೇ ಇಲ್ಲ. ಆಗಾಗ ಅವಳಿಗೆ ಬಲವಂತವಾಗಿ ಹಾಲು ಕುಡಿಸುವುದಷ್ಟೆ
ಮನೆಯಲ್ಲಿನ ಹೋಮ ಹವನ , ನೆಂಟರ ಗದ್ದಲ ಯಾವುದೂ ಅವಳನ್ನು ಎಬ್ಬಿಸಲು ಶಕ್ಯವಾಗಲಿಲ್ಲ
ರಾತ್ರಿ ನಾಮಕರಣದ ವೇಳೆಯಲ್ಲಿ ಕೊಂಚ ಅತ್ತಳಷ್ಟೆ
ನಮ್ಮಗಳ ಸಂಭ್ರಮ ಸಂತೋಷದ ಜೊತೆಗೆ ಅವಳಿಗಿಟ್ಟೇವು ಹೆಸರೊಂದನ್ನು
ಯಶಿತಾ ಅದುವೇ ನನ್ನ ಮಗಳ ಹೆಸರು